ನಾಜ್ದ್
ಸೌದಿ ಅರೇಬಿಯಾದ ಮಧ್ಯದಲ್ಲಿರುವ ಪ್ರದೇಶ. ಇದನ್ನು ನೆಜ್ದ್ ಎಂದೂ ಕರೆಯುತ್ತಾರೆ. ಇದು ಮುಖ್ಯವಾಗಿ ಬಂಡೆಗಳಿಂದ ಕೂಡಿರುವ ಪ್ರಸ್ಥಭೂಮಿಯಾಗಿದ್ದು ಹೆeóÁಜ್ ಪರ್ವತದ ಪೂರ್ವದ ಕಡೆಗೆ ಇಳಿಜಾರಿನಲ್ಲಿದೆ. ಇದರ ಉತ್ತರ, ಪೂರ್ವ ಮತ್ತು ದಕ್ಷಿಣ ಭಾಗಗಳನ್ನು ಆನ್-ನಫೂದ್ ಅದ್-ದಾಹ್‍ನ ಮತ್ತು ರೂಬ್-ಆಲ್-ಕಾಲೀ ಮರುಭೂಮಿಗಳು ಸುತ್ತುವರಿದಿವೆ. ಜಬಲ್ ಟು ವಾಯ್ಕ್ ಪರ್ವತ ಪ್ರದೇಶ ಮತ್ತು ಆಲ್-ಅರ್ಮಹ್ ಪ್ರಸ್ಥಭೂಮಿಗಳಲ್ಲಿರುವ ಓಯೆಸಿಸ್ ಭಾಗಗಳನ್ನು ಬಿಟ್ಟರೆ ಉಳಿದ ಭಾಗಗಳಲ್ಲಿ ಜನಸಂಖ್ಯೆ ವಿರಳ. ಈ ಬಂಜರು ಪ್ರದೇಶ ಅನೇಕ ಗುಂಪುಗಳ ನಡುವೆ ಹರಿದು ಹಂಚಿಹೋಗಿ ಅನೈಕ್ಯದ ಬೀಡಾಗಿತ್ತು. 18ನೆಯ ಶತಮಾನದ ಮಧ್ಯಭಾಗದಲ್ಲಿ ಈ ಪ್ರದೇಶ ವಹಾಬಿ ಚಳುವಳಿಯ ಕೇಂದ್ರವಾಗಿ ರಾಜಕೀಯ ಏಕತೆಗೆ ಸ್ಫೂರ್ತಿ ನೀಡಿತು. ಮಹಮದ್ ಇಬಾನ್ ಅಬ್ದ-ಅಲ್ ವಹಾಬ್ ಎಂಬ ಮುಸ್ಲಿಂ ಪಂಡಿತನ ಮತ್ತು ಆಲ್- ಸೌದ್ ಕುಟುಂಬದವರು ಈ ಚಳುವಳಿಯ ನಾಯಕರಾಗಿದ್ದರು. ನಾಜ್ದ್ ಅನ್ನು ಈ ಚಳುವಳಿ ಒಂದುಗೂಡಿಸಿತು. 1803 ರಲ್ಲಿ ಇದು ಮೆಕ್ಕದವರೆಗೆ ವಿಸ್ತರಿಸಿತು. ಅರಬರ ವಿಸ್ತರಣೆಯನ್ನು ಸಹಿಸದ ತುರ್ಕರು ಈ ಪ್ರದೇಶದ ರಾಜಧಾನಿಯಾಗಿದ್ದ ಅದ್- ದರೈಯವನ್ನು ಆಕ್ರಮಿಸಿಕೊಂಡರು. ಆದರೆ ಅಲ್-ಸೌದ್ ಬಹು ಬೇಗ ಚೇತರಿಸಿಕೊಂಡು ಹತೋಟಿ ಸ್ಥಾಪಿಸುವುದರಲ್ಲಿ ಯಶಸ್ವಿಯಾದ. 1824ರಲ್ಲಿ ರಿಯಾದನ್ನು ರಾಜಧಾನಿಯಾಗಿ ಮಾಡಿಕೊಂಡ. 19 ನೆಯ ಶತಮಾನದ ಅಂತ್ಯದಲ್ಲಿ ರಷೀದ್ ಮನೆತನದ ಈ ಪ್ರಾಂತ್ಯದ ಮೇಲೆ ತಾತ್ಕಾಲಿಕವಾಗಿ ಸ್ವಲ್ಪ ಕಾಲ ಅಧಿಕಾರವನ್ನು ವಿಸ್ತರಿಸಿತು. ಈ ಘಟನೆಯನ್ನು ಬಿಟ್ಟರೆ ಅಲ್-ಸೌದ್ ಮನೆತನದ ನಾಜ್ದ್ ಪ್ರದೇಶವನ್ನು ಅವಿಚ್ಛಿನ್ನವಾಗಿ ಆಳಿತು. ಇಬ್‍ನ್ ಸೌದ್ 1932ರಲ್ಲಿ ಏಕೀಕೃತ ಸೌದಿ ಅರೇಬಿಯಾದ ಉಗಮವನ್ನು ಘೋಷಿಸಿದ. ರೀಯದ್ ರಾಷ್ಟ್ರೀಯ ರಾಜಧಾನಿಯಾಯಿತು. ನಾಜ್ದ್ ಪ್ರದೇಶ ಅಲ್-ಕರಾಜ್, ಅಲ್-ಮೆಹಮೆಲ್, ಅಸ್-ಸೌದಯಾರ್, ಅಲ್-ವಾಶಮ್, ಅಲ್-ಅರೀದ್, ಆಲ್-ಕಾಸಿಂ ಮತ್ತು ಜಬಲ್ ಶಮ್ಮರ್ ಎಂಬ ಓಯಸಿಸ್‍ಗಳನ್ನೊಳಗೊಂಡಿದೆ.		
	  (ಎಂ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ